ಕುಂಟುಹಣ್ಣು

 ಸಾಮಾನ್ಯವಾಗಿ ಹಾಸಿಗೆ ಹಿಡಿದು ಮಲಗಿರುವ ರೋಗಿಗಳಲ್ಲಿ ಕಂಡುಬರುವ ಒಂದು ರೀತಿಯ ವ್ರಣ (ಬೆಡ್ ಸೋರ್, ಡಕ್ಯುಬೈಟಿಸ್ ಅಲ್ಸರ್). ಇದು ಎರಡು ರೀತಿಯದಾಗಿರಬಹುದು: (i) ದೀರ್ಘಕಾಲದ್ದಲ್ಲದುದು ಅಥವಾ ಪೋಷಣೆ ಸಂಬಂಧವಾದುದು. (ii) ದೀರ್ಘವಾದುದು ಅಥವಾ ನಿಲುವಿಗೆ ಸಂಬಂಧಿಸಿದುದು.

 ದೀರ್ಘಕಾಲದ್ದಲ್ಲದ ಕುಂಟುಹುಣ್ಣು: ಇದು ನರಹುರಿ ಅಥವಾ ಮಿದುಳು ಬಳ್ಳಿಯ ರೋಗ ಅಥವಾ ಅಪಘಾತಕ್ಕೆ ಸಂಬಂಧಿಸಿದುದು. ಕೆಲವು ವೇಳೆ ಎಷ್ಟು ಎಚ್ಚರಿಕೆ ವಹಿಸಿ ಶುಶ್ರೂಷೆ ಮಾಡಿದರೂ ಈ ಹುಣ್ಣು ತೀವ್ರವಾಗಿ ವಿಷಮಿಸುತ್ತದೆ.

 ದೀರ್ಘಕಾಲದ ಕುಂಟುಹುಣ್ಣು: ಇಂಥ ವ್ರಣ ಸಾಮಾನ್ಯವಾಗಿ ನಾಲ್ಕು ಅಂಶಗಳಿಂದ ಉಂಟಾಗುತ್ತದೆ-ಒತ್ತಡ, ಅಪಘಾತ, ನ್ಯೂನ ಪೋಷಣೆ ತೇವ.

 ವ್ರಣ ಯಾವ ಬಗೆಯದೇ ಅಗಿರಲಿ, ಅದನ್ನು ಗುಣಪಡಿಸುವಲ್ಲಿ ರೋಗ ನಿರೋಧಕ ಚಿಕಿತ್ಸೆ ಅತ್ಯಂತ ಮುಖ್ಯವಾದುದು. ಎಚ್ಚರಿಕೆ ಮತ್ತು ಕೌಶಲವಹಿಸಿ ನಡೆಸುವ ಶುಶ್ರೂಷೆಯಿಂದ ಒತ್ತಡ, ಅಪಘಾತ ಮತ್ತು ಬೆವರು, ಮೂತ್ರ ಅಥವಾ ಕೀವಿನಿಂದುಂಟಾಗುವ ತೇವವನ್ನು ಪರಿಹರಿಸಬಹುದು. ಚರ್ಮದ ಪೋಷಣೆಯನ್ನು ಕೊಲೋನ್ ಪರಿಮಳದ್ರವ ಅಥವಾ ಸ್ಪಿರಿಟ್ ಮೊದಲಾದುವನ್ನು ಉಪಯೋಗಿಸಿ ನೋಡಿಕೊಳ್ಳಬಹುದು. ಚರ್ಮದ ಉರಿಯೂತ ಅಥವಾ ಗೆಂಡೆಯುಂಟಾದಾಗ ಕುಂಟುಹುಣ್ಣು ಬರಬಹುದೆಂದು ಊಹಿಸಬಹುದು. ಒತ್ತಡದ ಪರಿಣಾಮವೇನೂ ಇಲ್ಲಿ ಬೀಳಲಾರದು. ಈ ಘಟ್ಟದಲ್ಲಿ ಚರ್ಮಮೃದುವಾಗಿದ್ದಲ್ಲಿ ಆಸವಿಸಿದ ನೀರಿನಲ್ಲಿ ತಯಾರಿಸಿದ 5% ಬೆಳ್ಳಿಯ ನೈಟ್ರೇಟ್ ದ್ರಾವಣದಿಂದ ಪಟಿಕದ ದ್ರಾವಣದಿಂದ ಚಿಕಿತ್ಸೆ ನಡೆಸಬಹುದು. ಚÀರ್ಮ ಸ್ವಲ್ಪ ಒಣಗಿ ಒರಟಾಗಿದ್ದಲ್ಲಿ 5% ಟ್ಯಾನಿಕ್ ಅಮ್ಲವನ್ನು ಜಲೀಯ ದ್ರಾವಣದಲ್ಲಿ ತಯಾರಿಸಿ ಉಪಯೋಗಿಸಿದರೆ ಪರಿಣಾಮಕಾರಿಯಾಗಬಹುದು. ಇಲಾಸ್ಟೊಪ್ಲಾಸ್ಟ್ ತುಂಡುಗಳಿಂದಲೂ ಹೊದಿಕೆ ಮಾಡಿ ರಕ್ಷಿಸಬಹುದು. ಹುಣ್ಣು ಗುಣಮುಖವಾಗತೊಡಗಿದಾಗ 10% ಇಕ್‍ಥ್ಯಾಲ್ (ಮತ್ಸ್ಯ ಸಂಬಂಧಿ) ಗ್ಲಿಸರಿನ್ ಉಪಯೋಗಿಸಿದಲ್ಲಿ ಒಳ್ಳೆಯ ಫಲಿತಾಂಶಗಳು ಕಂಡುಬರುವುವು. ಕೊಳೆತಭಾಗವನ್ನು ಎಚ್ಚರಿಕೆಯಿಂದ ಛೇಧಿಸುವುದೂ ಸೂಕ್ತವಾದುದು. ಇನ್ನೂ ಯುವಕರಾದ ಹಾಗೂ ಅರೋಗ್ಯವಂತರಾದ ರೋಗಿಗಳ ಚಿಕಿತ್ಸೆಯಲ್ಲಿ ಇಳಿಜಾರು ಚರ್ಮದ ಕಸಿಗಳನ್ನು ಉಪಯೋಗಿಸಿದಲ್ಲಿ ಬಹುಮಟ್ಟಿಗೆ ಸಫಲವಾಗುತ್ತದೆ. ಪೂತಿನಿರೋಧಕವಾಗಿ ಪೆನ್ಸಿಲಿನ್ ಅಥವಾ ಸಲ್ಛಾನೊಮೈಡ್‍ಗಳನ್ನು ಉಪಯೋಗಿಸಬಹುದು.

 

(ಎಸ್‍ಎ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ